ಕಾರ್ಯಕಾರಿತ್ವ

ವಿಜ್ಞಾನದ ಭಾಷೆಯಲ್ಲಿನ ಅನಿಶ್ಚಯಾರ್ಥವನ್ನು (ಆಂಬಿಗ್ಯಯಿಟಿ) ತೆಗೆದುಹಾಕಿ, ಅದನ್ನು ಸೃಷ್ಟೀಕರಿಸುವ ಉದ್ದೇಶಕ್ಕಾಗಿ ಪ್ರಾರಂಭವಾದ ಒಂದು ಆಂದೋಳನವಿದು (ಆಪರೇಷನಿಸಂ). ಯಾವುದಾದರೂ ಪದ ಅಥವಾ ತರ್ಕವಾಕ್ಯವನ್ನು ನಿಜವಾಗಿ ವೈಜ್ಞಾನಿಕವೆಂಬುದಾಗಿ ಪರಿಗಣಿಸುವುದಕ್ಕೆ ಪೂರ್ವಭಾವಿಯಾಗಿ, ಆವಶ್ಯಕವಾಗಿ ಪೂರ್ಣಗೊಳ್ಳಬೇಕಾಗಿರುವ ಕೆಲವು ನಿಯಮಗಳನ್ನು ವಿಧಿಸುವುದೇ ಕಾರ್ಯಕಾರಿತ್ವದ ಉದ್ದೇಶ.

ಜರ್ಮನಿಯ ತತ್ತ್ವಜ್ಞಾನಿಯಾದ ಲೈಬ್ನಿಟ್ಸ್‍ನ ಚಿಂತನೆಯಲ್ಲಿ ಕಾರ್ಯಕಾರಿತ್ವದ ಉಗಮವನ್ನು ಕಾಣಬಹುದು. ಎಲ್ಲ ವಿಜ್ಞಾನಗಳಿಗೂ ಅನ್ವಯವಾಗಬಲ್ಲಂಥ ಸರ್ವವ್ಯಾಪಿ ಭಾಷೆಯೊಂದು ಇರಬೇಕೆಂಬುದು ಆತನ ಸೂಚನೆಯಾಗಿತ್ತು. ಇದು ಸುಮಾರು ಮುನ್ನೂರು ವರ್ಷಗಳ ಹಿಂದಿನ ಸಲಹೆ. ಹತ್ತೊಂಬತ್ತನೆಯ ಶತಮಾನದ ತಾತ್ತ್ವಿಕ ಆಂದೋಳನಗಳಾದ ಫಲಪ್ರಮಾಣವಾದ (ಪ್ರಾಗ್ಮ್ಯಾಟಿಸಂ), ಆಗಸ್ಟ ಕಾಂತನ ಪ್ರತ್ಯಕ್ಷ ಪ್ರಮಾಣವಾದ (ಪಾಸಿಟಿವಿಸಂ) ಮತ್ತು ಬ್ರಿಟಿಷ್ ಅನುಭವೈಕವಾದ (ಎಂಪಿರಿಸಿಸಂ) ಮೊದಲಾದವು ಆಧುನಿಕ ಕಾರ್ಯಕಾರಿತ್ವದ ಬೆಳೆವಣಿಗೆಗೆ ನೆರವಾದವು. ಅನುಬಂಧನದ (ಕಂಡಿಷನಿಂಗ್) ಮೇಲೆ, ರಷ್ಯದಲ್ಲಿ, ಪಾವ್‍ಲಫ್ ಮಾಡಿದ ಕಾರ್ಯದಿಂದ ಪ್ರಾರಂಭವಾದ ವರ್ತನಾತ್ಮಕ ಸಂಶೋಧನೆಗಳು, ಕಾರ್ಯಕಾರಿತ್ವಕ್ಕೆ ಹೆಚ್ಚಿನ ಪರಿಪೋಷಕಳಾದವು. ವಾಸ್ತವಿಕತೆಯ ಸಂಜ್ಞಾನ ಯೋಗ್ಯವಾದ ವಸ್ತುವನ್ನು ಪರೀಕ್ಷಿಸಲು ಸಾಧ್ಯ ಮತ್ತು ವಾಸ್ತವಿಕ ಪರಿಣಾಮಗಳಿಗೆ ಅದು ಸಂಬಂಧಿಸಿದೆ- ಎಂದು ಮೇಲೆ ಹೆಸರಿಸಲಾದ ತತ್ತ್ವಶಾಸ್ತ್ರ ಪಂಥಗಳು ಒತ್ತಿ ಹೇಳಿದುವು. ಇದರಿಂದಾಗಿ ಊಹಾಪೋಹ ಮತ್ತು ಆಧ್ಯಾತ್ಮಶಾಸ್ತ್ರಗಳಿಗೆ (ಮೆಟಫಿಸಿಕ್ಸ್) ಪ್ರಬಲ ಪ್ರತಿಕ್ರಿಯೆ ರೂಪಗೊಂಡಿತಲ್ಲದೆ, ಘಟನೆಗಳ ಪ್ರತ್ಯಕ್ಷ ಹಾಗೂ ಪರೀಕ್ಷಾತ್ಮಕ ವೀಕ್ಷಣೆಗೆ ಪ್ರಾಮುಖ್ಯ ಬಂತು. ಈ ರೀತಿಯಲ್ಲಿ, ವಾಸ್ತವಿಕತೆಯ ಪ್ರಮುಖ ಒರೆಗಲ್ಲು ಅದರ ನಿಜತ್ವ (ವ್ಯಾಲಿಡಿಟಿ) ವಾಗಿರುತ್ತದೆಂದು ಪ್ರತಿಪಾದಿಸಿದ ಬರ್‍ಟ್ರೆಂಡ್ ರಸೆಲ್, ವಿಟ್‍ಜೆನ್‍ಸ್ಟೀನ್ ಮತ್ತು ಇತರರ ಪ್ರಭಾವಕ್ಕೆ ಒಳಗಾಗಿ, ಇಪ್ಪತ್ತನೆಯ ಶತಮಾನದ ತಾರ್ಕಿಕ ಪ್ರತ್ಯಕ್ಷಪ್ರಮಾಣವಾದ ಉದಯಕ್ಕೆ ಕಾರಣವಾದ ಆಂದೋಳನದ ಸ್ವಾಭಾವಿಕ ಪರಿಣಾಮವೇ ಕಾರ್ಯಕಾರಿತ್ವ ಎಂದು ಪರಿಗಣಿಸಬಹುದು.

ಭೌತವಿಜ್ಞಾನಿಯಾದ ಬ್ರಿಡ್ಜ್‍ಮನ್ 1927ರಲ್ಲಿ ಕಾರ್ಯಕಾರಿತ್ವ ತತ್ತ್ವವನ್ನು ಸ್ಪಷ್ಟವಾಗ ರೂಪಿಸಿದ್ದಾನೆ. ಈ ತತ್ತ್ವ ವೈಜ್ಞಾನಿಕ ಕಲ್ಪಿತಭಾವಗಳ (ಕಾನ್ಸೆಪ್ಟ್ಸ್) ಅರ್ಥಕ್ಕೆ ಸಂಬಂಧಿಸಿದೆ. ಕಲ್ಪಿತಭಾವವೊಂದರಲ್ಲಿರಬಹುದಾದ ಎಲ್ಲ ವಿಧವಾದ ಅಸಮರ್ಪಕ ಅರ್ಥಛಾಯೆಗಳನ್ನೂ ತೆಗೆದು ಹಾಕುವ ತಾರ್ಕಿಕ ವಿಧಾನವನ್ನು ಇದು ಒದಗಿಸುತ್ತದೆ. ವೈಜ್ಞಾನಿಕ ವೀಕ್ಷಣೆಯ ಆಧಾರದ ಮೇಲೆ ನಿಜವಾಗಿ ನೆಲಸಿರದ ಯಾವುದೇ ಕಲ್ಪಿತಭಾವವನ್ನಾಗಲೀ ಅದು ನಿರಾಕರಿಸುತ್ತದೆ. ಒಂದು ನಿರ್ದಿಷ್ಟ ಘಟನೆಯ ವೀಕ್ಷಣೆ ಮತ್ತು ಅಳತೆಗಳಿಗೆ ಬೇಕಾಗಿರುವ ಕಾರ್ಯಾಚರಣೆಗಳಿಗೆ (ಆಪರೇಷನ್ಸ್) ಕಲ್ಪಿತ ಭಾವವೊಂದರ ಅರ್ಥ ಸೀಮಿತವಾಗಿರುತ್ತದೆ ಎಂಬುದೇ ಕಾರ್ಯಕಾರಿತ್ವ ತತ್ತ್ವ. ಕಾರ್ಯಾಚರಣೆಗಳು ಎಂಬ ಪದದಲ್ಲಿ, ಘಟನೆಯೊಂದನ್ನು ವೀಕ್ಷಿಸಲು ಆವಶ್ಯಕವಾಗಿ ಬೇಕಾಗುವ ಹಸ್ತಾದಿ ಪ್ರಯೋಗ ಮತ್ತು ಗಣನೆಯ ವಿಧಾನಗಳೂ ಘಟನೆಗೆ ಸಂಬಂಧಿಸಿದಂತೆ, ವಿಜ್ಞಾನಿ ಕೊಡುವ ಪೂರ್ವಾಪರ ಹೇಳಿಕೆಗಳ ನಡುವೆ ಉಪಯೋಗಿಸಲಾಗುವ ತಾರ್ಕಿಕ ಮತ್ತು ಗಣನಾತ್ಮಕ ಹಂತಗಳೂ ಅಂತರ್ಗತವಾಗುತ್ತವೆ. ವೀಕ್ಷಣೆಯಲ್ಲಿರುವ ಕಾರ್ಯಾಚರಣೆಗಳ ನಿಷ್ಠುರವಾದ ವಿವರಣೆಯನ್ನು ಅವಲಂಬಿಸಿರುವ ವೈಜ್ಞಾನಿಕ ಕಲ್ಪಿತಭಾವಗಳ ಲಕ್ಷಣ ನಿರೂಪಣೆಗಳನ್ನು ಕಾರ್ಯಕಾರಿಲಕ್ಷಣ ನಿರೂಪಣೆಗಳು ಎಂದು ಕರೆಯಲಾಗಿದೆ. ವಿಜ್ಞಾನವನ್ನು ನಿಜವಾದ ವಸ್ತು ನಿಷ್ಠವಿದ್ಯೆಯನ್ನಾಗಿ ಮಾಡುವುದೇ ಅಂಥ ಲಕ್ಷಣನಿರೂಪಣೆಗಳ ಆಶಯ.

ಕಾರ್ಯಕಾರಿತ್ವ ಲಕ್ಷಣನಿರೂಪಣೆಗಳ ಸ್ವಭಾವವನ್ನು ಕೆಲವು ಉದಾಹರಣೆಗಳು ಸ್ಪಷ್ಟಪಡಿಸಬಲ್ಲವು. ಯಾವ ಕಾರ್ಯಾಚರಣೆಗಳಿಂದ ಒಂದು ವಸ್ತು ಅಳತೆ ಮಾಡಲ್ಪಟ್ಟು, ನಿಗದಿ ಮಾಡಲ್ಪಟ್ಟಿತೋ ಅವುಗಳ ಮೂಲಕವೇ ಆ ವಸ್ತುವಿನ ಉದ್ದದ ಲಕ್ಷಣ ನಿರೂಪಣೆಯನ್ನು ಕೊಡಬಹುದು. ಗಡಿಯಾರಗಳ ಅಥವಾ ಇತರ ಕಾಲಮಾಪನ ಕಾರ್ಯಾಚರಣೆಗಳ ಆಧಾರದ ಮೇಲೆ ಕಾಲದ ಲಕ್ಷಣ ನಿರೂಪಣೆಯನ್ನು ಕೊಡಬಹುದು. ಮನೋವಿಜ್ಞಾನದಿಂದ ದೃಷ್ಟಾಂತಗಳನ್ನು ತೆಗೆದು ಹೇಳುವುದಾದರೆ, ಈ ಕೆಳಗಿನವುಗಳನ್ನು ಪರಿಗಣಿಸಬಹುದು. ಸ್ಮರಣಾಪ್ರಾಪ್ತಾಂಕ (ರಿಕಾಲ್ ಸ್ಕೋರ್) ಅಥವಾ ಮರುಕಲಿಕೆಯ ಪ್ರಾಪ್ತಾಂಕದಲ್ಲಿ ಆಗುವ ಗಳಿಕೆಯ (ಸೇವಿಂಗ್) ಆಧಾರದ ಮೇಲೆ ಧಾರಣಕ್ರಿಯೆಯ ಲಕ್ಷಣ ನಿರೂಪಣೆಯನ್ನೂ ಪರೀಕ್ಷಾರ್ಥಿಯ ದೈಹಿಕ ವಯಸ್ಸು ಮತ್ತು ಮಾನಸಿಕ ವಯಸ್ಸನ್ನು ನಿರ್ಧರಿಸುವಾಗಿನ ಮತ್ತು ಬುದ್ಧಿಶಕ್ತಿಲಬ್ದವನ್ನು ಗಣಿಸುವಾಗಿನ ಕಾರ್ಯಾಚರಣೆಗಳ ಆಧಾರದ ಮೇಲೆ ಬುದ್ಧಿಶಕ್ತಿಯ ಲಕ್ಷಣ ನಿರೂಪಣೆಯನ್ನೂ ಕೊಡಬಹುದು. ವಿಜ್ಷಾನದ ಮೂಲಭೂತ ಗುಣಗಳಾದ ಮಿತ (ಕಾರಣ) ನ್ಯಾಯ (ಪಾರ್ಸಿಮೊನಿ) ಮತ್ತು ವಸ್ತ್ತುನಿಷ್ಠತೆಗಳನ್ನು ಕಾದಿಡುವುದೇ ಕಾರ್ಯಕಾರಿತ್ವ ಲಕ್ಷಣನಿರೂಪಣೆಗಳ ಹಿನ್ನೆಲೆಯಲ್ಲಿರುವ ತತ್ತ್ವ. ಈ ಎರಡು ಕಲ್ಪಿತ ಭಾವಗಳನ್ನು ಮುಂದೆ ವಿವರಿಸಲಾಗಿದೆ.

ಒಂದು ಕಡೆ ಸೈದ್ದಾಂತಿಕರು ಮತ್ತೊಂದು ಕಡೆ ಪ್ರಯೋಗಕರ್ತರು-ಇವರಿಬ್ಬರ ನಡುವಣ ಅಂತರನನ್ನು ಸೇರಿಸುವ ಕಾರ್ಯದಲ್ಲಿ ಕಾರ್ಯಕಾರಿತ್ವ ಒಂದು ಅಪೇಕ್ಷಿತ ಒರೆಗಲ್ಲು ಎಂದು ಸಾಮಾನ್ಯವಾಗಿ ಹೇಳಲಾಗಿದೆ. ಹೀಗಿದ್ದಾಗ್ಯೂ ಮಾನವನ ವರ್ತನೆ ಹಾಗೂ ಮಾನವನ ಅನುಭವಗಳನ್ನು ಅರ್ಥ ಮಾಡಿಕೊಳ್ಳುವ, ನಿಯಂತ್ರಿಸುವ ಮತ್ತು ಅವುಗಳ ಭವಿಷ್ಯವನ್ನು ನುಡಿಯುವ ಉದ್ದೇಶವುಳ್ಳ ತಮ್ಮ ವಿಜ್ಞಾನದ ಮೂಲಪ್ರವೃತ್ತಿಯನ್ನು ಮನೋವಿಜ್ಞಾನಿಗಳು ಕಡೆಗಣಿಸಲು ಸಾಧ್ಯವಿಲ್ಲ. ವರ್ತನೆ ಕಾರ್ಯಕಾರಿತ್ವ ಪ್ರತಿಪಾದನೆಗೆ ಒಳಗಾಗಬಹುದಾದರೂ ಅನುಭವ ಎಲ್ಲ ಸಂದರ್ಭಗಳಲ್ಲೂ ಅಂಥ ಪರೀಕ್ಷಣೆಗೆ ಸಿಲುಕದಿರಬಹುದು. ಪ್ರಕೃತಿಯ ಸಮಸ್ತವೂ ಭೌತಿಕವಾದುದಲ್ಲ ಅಥವಾ ಭೌತವಸ್ತುವಿಗೆ ಸಂಬಂಧಿಸಿದುದಲ್ಲ. ಜೀವದ ಸ್ವಲ್ಪ ಭಾಗ ಭೌತವಸ್ತುವಾದರೆ, ಅದರಲ್ಲಿ ಬಹುಭಾಗ ಭೌತವಸ್ತುವಲ್ಲ. ಮಾನವನ ವರ್ತನೆ ಮತ್ತು ಅನುಭವಗಳ ಭೌತಿಕ ಅಂಶಗಳ ಅಧ್ಯಯನದಲ್ಲಿ, ಮನೋವಿಜ್ಞಾನಿ ತೊಡಗಿರಬೇಕಾದರೆ ಕಾರ್ಯಕಾರಿತ್ವಕ್ಕೆ ಪ್ರಾಶಸ್ತ್ಯ ಕೊಡುವುದು ಅಗತ್ಯವಾಗಬಹುದು. ಆದರೆ ಪ್ರೇರಣೆಗಳು, ಮೌಲ್ಯಗಳು, ಧ್ಯೇಯಗಳು, ಇಚ್ಛೆಗಳು, ಆಲೋಚನೆಗಳು, ಮನೋಪ್ರತಿಮೆಗಳು, ಅಭಿವೃತ್ತಿಗಳು, ಮನೋಬಲಗಳು, ಭ್ರಾಂತಿಗಳು, ಚಿತ್ತಪೀಡೆಗಳು -ಇಂಥ ಸಂಗತಿಗಳ ವಿಚಾರವಾಗಿ ವ್ಯವಹರಿಸುತ್ತಿರುವಾಗ, ಕಾರ್ಯಕಾರಿತ್ವ ತತ್ತ್ವ ಸದಾಕಾಲವೂ ಅನ್ವಯವಾಗುವ ಸಾಧ್ಯತೆ ಇಲ್ಲದಿರಬಹುದು.

ವಾಸ್ತವವಾಗಿ, ತಮ್ಮ ಪದಗಳು ಮತ್ತು ತರ್ಕವಾಕ್ಯಗಳನ್ನು ಕಾರ್ಯಕಾರಿತ್ವದ ಚೌಕಟ್ಟಿಗೆ ನಿಖರವಾಗಿ ಸೀಮಿತಗೊಳಿಸುವ ಕಾರ್ಯದಲ್ಲಿ ಕಾರ್ಯಕಾರಿತ್ವವಾದಿಗಳೇ ಯಶಸ್ಸುಗಳಿಸಿಲ್ಲ. ಮನೋವಿಜ್ಞಾನದಲ್ಲಿ ಕಾರ್ಯಕಾರಿತ್ವವನ್ನು ಆಚರಣೆಗೆ ತರುತ್ತಿರುವ ಪ್ರಮುಖರಲ್ಲೊಬ್ಬನಾದ ಟೋಲ್‍ಮನ್, ಉದ್ದೇಶದ ವಿಚಾರವಾಗಿ ಪ್ರಸ್ತಾಪಿಸಿ ತನ್ನ ಪರೀಕ್ಷೆಗೊಳಗಾದ ಇಲಿಗಳಿಗೆ ಇಚ್ಛೆ ಇದೆ ಎಂದು ಊಹಿಸುತ್ತಾನೆ. ಆದರೆ ಕಾರ್ಯಕಾರಿತ್ವದ ದೃಷ್ಟಿಯಿಂದ ಅಂಥ ಪದಗಳನ್ನು ಉಪಯೋಗಿಸುವುದಕ್ಕೆ ಆತನಿಗೆ ಅಧಿಕಾರವಿಲ್ಲ. ಮತ್ತೊಬ್ಬ ಮನೋವಿಜ್ಞಾನಿಯಾದ, ಸ್ಟೀವನ್ಸ್ ತನ್ನ ಸಂಶೋಧನಾ ಪ್ರಬಂಧವಾದ ಮನೋವಿಜ್ಞಾನ ಮತ್ತು ವಿಜ್ಞಾನದ ವಿಜ್ಞಾನದಲ್ಲಿ, (1939) ವಿಪರೀತ ಕಾರ್ಯಕಾರಿತ್ವದಲ್ಲಿನ ದೋಷಗಳನ್ನು ಹೊರಗೆಡಹಿದ್ದಾನೆ.

ಕಾರ್ಯಕಾರಿತ್ವದ ಪ್ರಮುಖ ಉದ್ದೇಶಗಳು ವೀಕ್ಷಣೆ, ವಸ್ತುನಿಷ್ಠತೆ, ಸರಳತೆ ಮತ್ತು ಅಭಿವ್ಯಕ್ತಿ ಸಾಧ್ಯತೆಗಳೆಂಬುದು ಇಷ್ಟರಿಂದಲೇ ವೇದ್ಯವಾಗಿರಬಹುದು. ಇವನ್ನು ಸ್ವಲ್ಪ ಪರೀಕ್ಷಿಸುವುದು ಅಗತ್ಯ. ಭೌತವಿಜ್ಞಾನದಲ್ಲಿಯೂ ವೀಕ್ಷಣೆಗೆ ಒಳಗಾಗಿರುವ ಘಟನೆ ವೀಕ್ಷಣೆಯನ್ನು ನಡೆಸುವುದರಲ್ಲಿ ನಿಷ್ಕ್ರಷ್ಟವಾದ ಕಾರ್ಯಾಚರಣೆಗಳನ್ನು ಉಪಯೋಗಿಸಿದಾಗ್ಯೂ ವೀಕ್ಷಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಹೊಂದುತ್ತದೆಂಬುದು ಎಲ್ಲರೂ ತಿಳಿದಿರುವ ಸತ್ಯಸಂಗತಿ. ಹೀಗಿರುವುದರಿಂದ, ಚಲಿಸುತ್ತಿರುವ ಎಲೆಕ್ಟ್ರಾನನ್ನು ಅಳೆಯಲು ಸಾಧ್ಯವಾಗುವಂತೆ ಅದನ್ನು ಪ್ರಖರವಾದ ಬೆಳಕಿನಿಂದ ಬೆಳಗಿಸಬೇಕು. ಆದರೆ ಈ ಬೆಳಕಿನ ಕಿರಣ ಎಲೆಕ್ಟ್ರಾನ್ ಚಲನಮಾರ್ಗದಲ್ಲಿ ಅಡ್ಡಿಯನ್ನುಂಟು ಮಾಡುವುದಲ್ಲದೆ, ಬೆಳಕಿನ ತೀಕ್ಷ್ಣತೆ ಅಧಿಕವಾದಂತೆಲ್ಲ ಎಲೆಕ್ಟ್ರಾನ್ ಚಲನಮಾರ್ಗದಲ್ಲಿ ಅಡಚಣೆ ಅಧಿಕವಾಗುತ್ತದೆ. ಈ ಪ್ರಕ್ರಿಯೆ ಮಾನಸಿಕ ಘಟನೆಗಳ ವೀಕ್ಷಣೆಯಲ್ಲಿ ಹೆಚ್ಚು ಜಟಿಲವಾಗುವುದಲ್ಲದೆ, ಅಡಚಣೆಯೂ ಅಧಿಕವಾಗುತ್ತದೆ ವೀಕ್ಷಣಾಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುವ ದೋಷಗಳನ್ನು, ಮನೋವಿಜ್ಞಾನಿ ಸಂಪೂರ್ಣವಾಗಿ ಹೋಗಲಾಡಿಸಲಾರ. ಸಂಜ್ಞಾನ, ಪ್ರೇರಣೆ, ಸೃಜನಾತ್ಮಕತೆ, ಅಭಿವೃತ್ತಿಗಳು, ಮೌಲ್ಯಗಳು ಮತ್ತು ಅಭಿರುಚಿಗಳು, ಇಚ್ಛೆ, ಒಳನೋಟ, ಆಲೋಚನೆ ಮತ್ತು ನಿರ್ಣಯಗಳಂಥ ಘಟನೆಗಳ ಅಧ್ಯಯನದಲ್ಲಿ ತೊಡಗಿರುವಾಗಲಂತೂ ಅದು ಅತಿ ಕಷ್ಷ. ಆದರೆ ವೀಕ್ಷಣೆಯಲ್ಲಿ ಉಂಟಾಗಬಹುದಾದ ಅಂಥ ಪಕ್ಷಪಾತಗಳು ಮತ್ತು ದೋಷಗಳ ಸ್ವಭಾವ ಮತ್ತು ವ್ಯಾಪಕತೆಗಳನ್ನು ಗುರುತಿಸುವ ಆಶಯವನ್ನು ಆತ ಹೊಂದಿರಬಹುದು. ವೀಕ್ಷಣಾತ್ಮಕ ಸಿದ್ಧಾಂತದಿಂದ, ಮೂಲಭೂತವಾಗಿ ಉದ್ಭವಿಸಿರುವ, ವಿಪರೀತ ಕಾರ್ಯಕಾರಿತ್ವದ ಮಿತಿಯನ್ನು ತೋರಿಸಲು ಇದು ಸಹಕಾರಿಯಾಗುತ್ತದೆ.

ವೀಕ್ಷಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸತ್ಯವಾಗಿರುವ ವಿಷಯ ಹೆಚ್ಚು ಕಡಿಮೆ ವಸ್ತುನಿಷ್ಠತೆಯ ವಿಚಾರದಲ್ಲೂ ಸತ್ಯವೆನಿಸುತ್ತದೆ. ಆಲ್ಪೋರ್ಟನ ಥಿಯೊರೀಸ್ ಆಫ್ ಪರ್ಸೆಪ್ಷನ್ ಅಂಡ್ ಕಾನ್ಸೆಪ್ಟ್ ಆ¥sóï ಸ್ಟ್ರಕ್ಚರ್ (1954) ಎಂಬ ಪುಸ್ತಕದಲ್ಲಿ ವಸ್ತುನಿಷ್ಠತೆಯ ಮೂರು ಪ್ರಮಾಣಗಳನ್ನು ಹೆಸರಿಸಲಾಗಿದೆ: (1) ವೀಕ್ಷಣೆಯ ವಸ್ತುನಿಷ್ಠತೆ, (11) ಸಂಬಂಧ ಮತ್ತು ಕಾಣ್ಕೆ, (111) ವೀಕ್ಷಕ-ಒಪ್ಪಂದ. ವೀಕ್ಷಿಸಲಾದ ಅಥವಾ ವಿವರಿಸಲಾದ ಘಟನೆಯಲ್ಲಿ, ವೀಕ್ಷಕ ಎಷ್ಟು ಕಡಿಮೆ ಪ್ರಮಾಣದಲ್ಲಿ ಒಳಗಾಗಿರುತ್ತಾನೋ ಅಷ್ಟೂ ವಸ್ತುನಿಷ್ಠತೆ ಅಧಿಕವಾಗಿರುತ್ತದೆ. ಅಧ್ಯಯನಕ್ಕೆ ಒಳಗಾಗಿರುವ ವಿಷಯದ ವೀಕ್ಷಣೆ ಮತ್ತು ದಾಖಲೆ ಇತರ ವೀಕ್ಷಕರ ಪರಿಶೀಲನೆಗೂ ಭೌತಿಕವಾಗಿ ಒಳಪಡುವಂತಿರಬೇಕು. ಇದರಿಂದ ವಸ್ತುನಿಷ್ಟತೆ ಹೆಚ್ಚುತ್ತದೆ. ಮೂರನೆಯ ಪ್ರಮಾಣ ವಾದ ವೀಕ್ಷಕ-ಒಪ್ಪಂದ ಕಾರ್ಯಕಾರಿತ್ವದ ನಿಷ್ಕ್ರಷ್ಟ ನಿಯಮಗಳನ್ನು ಅವಲಂಬಿಸಿದೆ. ಒಬ್ಬನ ಪರಿಶೀಲನೆಯನ್ನು ಇತರರೂ ಪ್ರಾಯೋಗಿಕವಾಗಿ ನೋಡಿ ಪರೀಕ್ಷಿಸುವಂತಿರಬೇಕು. ಪುನಃ ಪ್ರಯೋಗಗಳಿಗೆ ಅವಕಾಶವಿರುವಂತೆ ವೀಕ್ಷಣೆ ಸಾಕಷ್ಟು ಬಹಿರಂಗವಾಗಿರಬೇಕು. ವಸ್ತುನಿಷ್ಠತೆಯ ಈ ಮೂರು ವಿಧವಾದ ಪ್ರಮಾಣಗಳೂ ಪರಸ್ಪರಾವಲಂಬಿಗಳಾಗಿವೆ. ಅವುಗಳಲ್ಲಿ ಎರಡನೆಯದು ಮೂಲಭೂತವಾದುದು. ಅದು ಹೇಗೇ ಇರಲಿ, ಈ ಮೂರೂ ಆಶಯಗಳನ್ನು ಸಾಧಿಸುವ ಗುರಿ ಮನೋವಿಜ್ಞಾನದಲ್ಲಿರಬೇಕು. ಭೌತವಿಜ್ಞಾನದಲ್ಲಿ ಅದು ಸಾಧ್ಯವಿರುವಷ್ಟೇ ನಿಷ್ಠುರತೆಯಿಂದ, ಇಲ್ಲಿಯೂ ಅದನ್ನು ಅನ್ವಯಿಸಲು ನಾವು ಎಂದೆಂದೂ ನೀರೀಕ್ಷಿಸಲಾಗದು.

ವಿಜ್ಞಾನದ ಭಾಷೆ ಮತ್ತು ಸಿದ್ಧಾಂತಗಳಲ್ಲಿ, ಸರಳತೆ ಮತ್ತು ಸಂಪರ್ಕಶೀಲತೆಗಳು ಬಹು ಹಿಂದಿನಿಂದ ರೂಢಿಯಲ್ಲಿರುವ ಧ್ಯೇಯಗಳು. ವಿಜ್ಞಾನದ ಮೂರು ಮೂಲ ನಂಬಿಕೆಗಳಲ್ಲಿ ಎರಡನೆಯದರಿಂದ, ಸರಳತಾ ತತ್ತ್ವ ಮೂಲಭೂತವಾಗಿ ಉದ್ಭವಿಸುತ್ತದೆ. ಆ ನಂಬಿಕೆಗಳು ಹೀಗವೆ: 1 ಪ್ರಕೃತಿ ಸುಸಂಗತವಾಗಿದೆ (ಕನ್ಸಿಸ್ಟೆಂಟ್) 2 ಪ್ರಕೃತಿಯ ಮೂಲತತ್ತ್ವಗಳು ಅನಂತವಾಗಿರದೆ ಮಿತವಾಗಿವೆ ಅಥವಾ ಯಾವುದೋ ಒಂದು ಕ್ರಮದಲ್ಲಿ ಒಂದುಗೂಡಿವೆ ಮತ್ತು 3 ವ್ಯಾಪಕವಾದ ನೈಜತತ್ತ್ವಗಳ ಹಿನ್ನೆಲೆಯಲ್ಲಿ ಯಾವುದೋ ಒಂದು ವ್ಯವಸ್ಥೆಯಿದೆ. ಸರಳತೆಯ ನೆಪದಲ್ಲಿ, ಪ್ರಕೃತಿಯ ಮತ್ತು ಜೀವನದ ಜಟಿಲ ಸಮಸ್ಯೆಗಳನ್ನು ವಿಜ್ಞಾನ ಕಡೆಗಣಿಸಲು ಸಾಧ್ಯವೆಂಬುದು ಇದರ ಅರ್ಥವಲ್ಲ. ಹೊರನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ತೋರುವ ಘಟನೆಗಳನ್ನು ಒಂದುಗೂಡಿಸುವ ಉಚ್ಚರೀತಿಯ ಅಮೂರ್ತಭಾವನೆಗಳು ಮತ್ತು ಸಾಮಾನ್ಯೀಕರಣಗಳನ್ನು ಕಂಡುಹಿಡಿಯಲು ಎಲ್ಲ ವಿಜ್ಞಾನಿಗಳಿಗೂ ಇರುವ ಭರವಸೆಯನ್ನು ಈ ತತ್ತ್ವ ಪ್ರತಿಪಾದಿಸುತ್ತದೆ. ವಿಜ್ಞಾನದ ಕಲ್ಪಿತಭಾವಗಳ ಮತ್ತು ತರ್ಕ ವಾಕ್ಯಗಳ ಭಾಷೆಯ ಉಪಯೋಗದಲ್ಲಿ ಹಿತ ಮಿತ ಇರಬೇಕೆಂಬುದು ಸರಳತೆಯ ಮತ್ತೊಂದು ಅರ್ಥ. ಈ ಎರಡು ಅರ್ಥಗಳಿಗೂ ಪರಸ್ಪರ ಸಂಬಂಧವಿದೆ. ಕೊನೆಯಪಕ್ಷ, ಕಾರ್ಯಕಾರಿತ್ವಕ ಲಕ್ಷಣ ನಿರೂಪಣೆಗಳಿರಬೇಕೆಂಬ ತನ್ನ ಒತ್ತಾಯದಿಂದಲಾದರೂ ವಿಜ್ಞಾನ ಭಾಷೆಯಲ್ಲಿರಬಹುದಾದ ಎಲ್ಲ ಅನಿಶ್ಚಯಾರ್ಥವನ್ನೂ ತೆಗೆದು ಹಾಕುವುದರ ಮೂಲಕ ಸರಳತೆಯನ್ನು ಸಾಧಿಸಲು ಸಾಧ್ಯವಾಗಬಹುದೆಂಬುದೇ ಕಾರ್ಯಕಾರಿತ್ವವಾದಿಯ ಭರವಸೆ.

ಸ್ಪಷ್ಟತೆ ಎಲ್ಲ ವಿಜ್ಞಾನದ ಮುಖ್ಯ ಲಕ್ಷಣಗಳಲ್ಲೊಂದು. ಆದರೆ ಕಾರ್ಯಕಾರಿತ್ವ ಲಕ್ಷಣನಿರೂಪಣೆಗಳ ಮೂಲಕ ಸಾಧಿಸುವ, ಕಾರ್ಯಕಾರಿತ್ವಜ್ಞನ ಪ್ರಕಟ ರೀತಿಯೊಂದೇ ವಿಜ್ಞಾನಕ್ಕೆ ತೆರೆದಿರುವ ಮಾರ್ಗವಲ್ಲ. ಈ ರೀತಿಯಲ್ಲಿ ಲಕ್ಷಣ ನಿರೂಪಣೆಗೆ ಒಳಗಾಗದಿರುವ ಅನೇಕ ಪದಗಳು ಮನೋವಿಜ್ಞಾನದಲ್ಲಿ ಅಂಗೀಕೃತ ಸ್ಥಾನ ಪಡೆದಿವೆ. ಪರಂಪರೆಯಾದ ಉಪಸಮಗಳ (ಸಕ್ಸಸಿವ್ ಅಪ್ರೋಕ್ಸಿಮೇಷನ್ಸ್) ಮೂಲಕ ವೈಜ್ಞಾನಿಕ ಸತ್ಯದತ್ತ ನಮ್ಮನ್ನು ಕೊಂಡೊಯ್ಯಬಲ್ಲ ಉಪಯುಕ್ತ ಪದಗಳು ಅವು. ಸತ್ಯವೆಂಬುದು ಕಾರ್ಯಕಾರಿತ್ವ ತರ್ಕವಾಕ್ಯಗಳ ಪರ್ಯಾಯ ಪದವಲ್ಲ. ಐನ್‍ಸ್ಟೀನನ ಸಾಪೇಕ್ಷವಾದದ ಪ್ರಾರಂಭಿಕ ಕಲ್ಪಿತ ಭಾವನೆ ಮುಂದೆ ಕಾರ್ಯಾಚರಣೆಗಳಿಗೆ ಒಳಪಡುವಂತಾದರೂ ನಿಷ್ಕøಷ್ಟವಾಗಿ ಕಾರ್ಯಕಾರಿತ್ವ ಪದಗಳಿಂದ ಕೂಡಿರಲಿಲ್ಲ.

ಮನೋವ್ಶೆಜ್ಞೌನಿಕ ಸಿದ್ದಾಂತದ ಇಂದಿನ ಅವಸ್ಥೆಯಲ್ಲಿ ಕಟ್ಟುನಿಟ್ಟಾದ ಕಾರ್ಯಕಾರಿತ್ವವನ್ನು ಆಚರಣೆಗೆ ತರಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಪ್ರಾಕಲ್ಪಿತ ರೂಪಣಗಳು (ಹೈಪೊತೆಟಿಕಲ್ ಕಾನ್ಸೆಪ್ಟ್ಸ್) ಮತ್ತು ಮಧ್ಯವರ್ತಿ ಪರಿವತ್ರ್ಯಗಳು (ಇಂಟರ್‍ವೀನಿಂಗ್ ವೇರಿಯಬಲ್ಸ್) ಕಾರ್ಯಕಾರಿ ಲಕ್ಷಣ ನಿರೂಪಣೆಗಳಷ್ಟೆ ಬೆಲೆ ಬಾಳಬಲ್ಲವು. ಕಾರ್ಯಕಾರಿತ್ವ ಹೆಚ್ಚಿದರೆ ಮನೋವಿಜ್ಞಾನದ ವಿಶ್ವಾಸನೀಯತೆಯ ಒರೆಗಲ್ಲುಗಳನ್ನು ಒದಗಿಸಬಲ್ಲುದೇ ಹೊರತು ಅದರ ನಿಜತ್ವದ ಒರೆಗಲ್ಲುಗಳನ್ನು ಅವಶ್ಯವಾಗಿ ಒದಗಿಸಲಾರದು.

ಮನೋವಿಜ್ಞಾನವನ್ನು ಗೊಂದಲ ಪರಿಸ್ಥಿತಿ ಮತ್ತು ವ್ಯಕ್ತಿನಿಷ್ಠೆಗಳಿಂದ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕಾರಿತ್ವ ಅದರ ಮೇಲೆ ಔಪಚಾರಿಕ ಪ್ರಭಾವವನ್ನು ಬೀರಿದೆ ಎಂದು ನಿರ್ಧಾರವಾಗಿ ಹೇಳಬಹುದು. ಆದರೆ ಮನೋವಿಜ್ಞಾನದ ಮೂಲ ಪ್ರಕೃತಿಯನ್ನು ಮನಸ್ಸಿನಲ್ಲಿಡದೆ, ಅಧಿಕವಾದ ಮತಾಂಧತೆಯಿಂದ ಅದನ್ನು ಮುಂದುವರಿಸಿದ್ದೇ ಆದರೆ ಅದರಿಂದ ಅಪಾಯಗಳು ಉಂಟು.           

 (ಎಸ್.ಬಿ.ಎಲ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ